ಪಂಚ ವಿಶೇಷಗಳು -
ಪಾಶ್ಚಾತ್ಯ ತರ್ಕಶಾಸ್ತ್ರದ ಪ್ರಕಾರ ಒಂದು ತರ್ಕಶುದ್ಧ ವಾಕ್ಯದಲ್ಲಿ ವಿಧೇಯ (ಪ್ರೆಡಿಕೆಟ್) ಉದ್ದೇಶ್ಯದೊಂದಿಗೆ (ಸಬ್ಜಕ್ಟ್) ಹೊಂದಿರಬಹುದಾದ ಐದು ಬಗೆಯ ಸಂಬಂಧಗಳು (ಪ್ರೆಡಿಕಬಲ್ಸ್). ಅರಿಸ್ಟಾಟಲ್‍ನ ಪ್ರಕಾರ ಆ ಐದು ಹೀಗೆವೆ:

	(1) ಲಕ್ಷಣ (ಡೆಫನಿಷನ್) (2) ಅನುಗತ ಗುಣ (ಪ್ರೊಪ್ರಿಯು) (3) ಆಗಂತುಕ ಗುಣ (ಆ್ಯಕ್ಸಿಡೆನ್ಸ್) (4) ಜಾತಿ ಅಥವಾ ಸಾಮಾನ್ಯ (ಜೀನಸ್) ಮತ್ತು (5) ವ್ಯಾವರ್ತಕ ಧರ್ಮ (ಡಿಫರೆನ್ಷಿಯ).

	ಇವುಗಳಲ್ಲಿ ಲಕ್ಷಣವೆಂದರೆ, ಒಂದು ಉದ್ದೇಶ್ಯದ ಸಾಮಾನ್ಯಕ್ಕೆ ಅಸಾಧಾರಣವಾದ ಧರ್ಮ ಅಥವಾ ಧರ್ಮಗಳ ನಿರ್ದೇಶನ. ಉದಾಹರಣೆಗೆ, ಚಿಂತನಶೀಲ ಪ್ರಾಣಿ ಎಂಬುದು ಮನುಷ್ಯನ ಲಕ್ಷಣ. ಮನುಷ್ಯನನ್ನು ಒಳಗೊಂಡಂತೆ ಮಿಕ್ಕವನ್ನೂ ಒಳಗೊಳ್ಳುವಷ್ಟು ವ್ಯಾಪ್ತಿವೈಶಾಲ್ಯವಿರುವ ಜಾತಿ ಅಥವಾ ಸಾಮಾನ್ಯವೇ ಪ್ರಾಣಿ ಎಂಬುದು. ಮಿಕ್ಕ ಪ್ರಾಣಿಗಳಿಂದ ಮನುಷ್ಯನನ್ನು ಪ್ರತ್ಯೇಕಿಸುವಂತಿರುವ ವ್ಯಾವರ್ತಕ ಧರ್ಮವೇ ಚಿಂತನಶೀಲತ್ವ. ಮನುಷ್ಯನಲ್ಲಿ ಅಸಾಧಾರಣವಾಗಿ ಕಾರಣಬರುವಂಥ, ಆದರೆ ವ್ಯಾವರ್ತಕ ಧರ್ಮಗಳಲ್ಲದಿರುವ ಅನುಗತಗುಣಗಳೆಂದರೆ ನಗೆ, ಅಳು ಮತ್ತು ನುಡಿಗಳೆನ್ನಬಹುದು. ಹೀಗಿಲ್ಲದೆ, ಆಕಸ್ಮಿಕವಾಗಿ ಆಗೊಮ್ಮೆ ಈಗೊಮ್ಮೆ ಮನುಷ್ಯನಲ್ಲಿ ಗೋಚರವಾಗುವ ಗುಣಗಳು ಆಗಂತುಕ ಗುಣಗಳೆನಿಸುವುವು. ಉದಾಹರಣೆಗೆ ಅಡಿಗೆ ಮಾಡುವುದು, ಎಪ್ಪತ್ತು ವರ್ಷ ಬದುಕಿರುವುದು, ಟೋಪಿ ಹಾಕಿಕೊಳ್ಳುವುದು ಇತ್ಯಾದಿ. ಈ ಪಂಚವಿಶೇಷಗಳಲ್ಲಿ ಲಕ್ಷಣ, ಸಾಮಾನ್ಯ ಮತ್ತು ವ್ಯಾವರ್ತಕ ಧರ್ಮಗಳು ಉದ್ದೇಶ್ಯದ ಮೌಲಿಕ ಸ್ವರೂಪವನ್ನು ಕುರಿತಿರುತ್ತವೆ; ಅನುಗತ ಹಾಗೂ ಆಗಂತುಕ ಗುಣಗಳು ಹಾಗೆ ಅಸಾಧಾರಣ ಸ್ವರೂಪವನ್ನು ಕುರಿತಿರುವುದಿಲ್ಲ. ಉದ್ದೇಶ್ಯ ವಿಧೇಯಗಳೆರಡರ ನಿರ್ದೇಶನವ್ಯಾಪ್ತಿ ಒಂದೇ ಆಗಿದ್ದರೆ ಅವನ್ನು ಸಮವ್ಯಾಪಕವೆನ್ನುವರು. ಲಕ್ಷಣ ಹಾಗೂ ಅನುಗತಗುಣಗಳೆರಡೂ ಉದ್ದೇಶ್ಯಕ್ಕೆ ಸಮವ್ಯಾಪಕಗಳೆನಿಸುವುವು. ಹೇಗೆಂದರೆ ಮನುಷ್ಯ ಚಿಂತನ ಶೀಲ ಪ್ರಾಣಿ ಎಂಬ ಲಕ್ಷಣದಲ್ಲಿ ಮನುಷ್ಯ ಹಾಗೂ ಚಿಂತನಶೀಲ ಪ್ರಾಣಿ ಇವೆರಡರ ಅರ್ಥವ್ಯಾಪ್ತಿ ಒಂದೇ ಆಗಿದೆ. ಮನುಷ್ಯ ನಗೆಯುಳ್ಳ ಪ್ರಾಣಿ ಎನ್ನುವಾಗಲೂ ನಗೆಯುಳ್ಳ ಮನುಷ್ಯೇತರ ಪ್ರಾಣಿ ಯಾವುದೂ ಇಲ್ಲದ ಕಾರಣ, ಮನುಷ್ಯ ಮತ್ತು ನಗೆಯುಳ್ಳ ಪ್ರಾಣಿಗಳಲ್ಲಿ ಸಮವ್ಯಾಪಕತ್ವವುಂಟು. ಮಿಕ್ಕ ಮೂರು ವಿಶೇಷಗಳ ಸಂಬಂಧ ಈ ರೀತಿಯಾಗಿರುವುದಿಲ್ಲ. ಮನುಷ್ಯ ಪ್ರಾಣಿಜಾತಿ ಎನ್ನುವಾಗ ಪ್ರಾಣಿ ಜಾತಿಯಲ್ಲಿ ಮನುಷ್ಯನಲ್ಲದ ಅನೇಕ ಪ್ರಾಣಿಗಳೂ ಅಂತರ್ಗತವಾಗುತ್ತವೆ. ಮನುಷ್ಯ ಚಿಂತನಶೀಲ ಎಂದು ವ್ಯಾವರ್ತಕ ಧರ್ಮವನ್ನಷ್ಟೇ ಹೇಳಿದಾಗ ಅದು ಇತರ ಪ್ರಾಣಿಗಳಿಂದ ಮನುಷ್ಯನನ್ನು ಪ್ರತ್ಯೇಕಿಸಿದರೂ ದೇವಾದಿಗಳಿಂದ ಪ್ರತ್ಯೇಕಿಸುವುದೆಂದು ತೀರ್ಮಾನಿಸುವಂತಿಲ್ಲ. ದೇವಾದಿಗಳ ಚಿಂತನಶೀಲತ್ವವನ್ನು ತರ್ಕಶಾಸ್ತ್ರ ಒಪ್ಪುತ್ತದೆ. ಮನುಷ್ಯ ಎಪ್ಪತ್ತು ವರ್ಷ ಜೀವಿಸುತ್ತಾನೆ ಎಂಬ ಆಗಂತುಕಗುಣದ ಉಲ್ಲೇಖದಲ್ಲಿ ಕೂಡ ಇಷ್ಟೆ ಕಾಲ ಜೀವಿಸುವ ಆನೆಗಳೂ ಇರುವುದರಿಂದ ಅದು ಅಸಮವ್ಯಾಪಕವೇ ಸರಿ. ಆಗಂತುಕ ಹಾಗೂ ವ್ಯಾವರ್ತಕ ಗುಣಗಳ ನಿರ್ಣಯ ವಿಜ್ಞಾನದ ವಿಕಾಸಕ್ಕೆ ಇಂದಿಗೂ ಅಗತ್ಯವಾಗಿದೆ. 

	ಕಾಲಾಂತರದಲ್ಲಿ ಪಾರ್‍ಫಿರಿ ಎಂಬ ತತ್ತ್ವಜ್ಞಾನಿ (233-304) ಅರಿಸ್ಟಾಟಲನ ಪಂಚವಿಶೇಷಗಳಲ್ಲಿ ಕೆಲವೊಂದು ಮಾರ್ಪಾಡುಗಳನ್ನು ಬಳಕೆಗೆ ತಂದ. ಲಕ್ಷಣದ ಬದಲು ಆತ ವಿಶೇಷವನ್ನು ನಿರೂಪಿಸಿದ್ದಲ್ಲದೆ ಆಗಂತುಕ ಗುಣಗಳಲ್ಲಿ ವಿಭಾಜ್ಯ ಮತ್ತು ಅವಿಭಾಜ್ಯ ಎಂಬ ಪ್ರಕಾರಗಳನ್ನೂ ವಿವೇಚಿಸಿದ. ಇದರಿಂದಾಗಿ ಸಾಮನ್ಯವಿಶೇಷಗಳ ಸಾಪೇಕ್ಷ ಸ್ವರೂಪ ಸ್ಪಷ್ಟತರವಾಗುವಂತಾಯಿತು. ವಿಶಾಲತರ ವ್ಯಾಪ್ತಿಯುಳ್ಳ ವರ್ಗವೇ `ಸಾಮಾನ್ಯ ಸಂಕುಚಿತವಾದ ವ್ಯಾಪ್ತಿಯುಳ್ಳ ವರ್ಗವೇ `ವಿಶೇಷ ಎಂಬ ಮೂಲತತ್ತ್ವ ಇಂದು ಸರ್ವಮಾನ್ಯವಾಗಿದೆ. ಪರಸ್ಪರ ಸಾಪೇಕ್ಷವಾಗಿಯೇ ಯಾವಾಗಲೂ ಅವು ಇರಬಲ್ಲವು. ಉದಾಹರಣೆಗೆ ಪ್ರಾಣಿ ಎಂಬ ವರ್ಗ ಮನುಷ್ಯ ಎಂಬ ವರ್ಗಕ್ಕಿಂತ ವಿಶಾಲತರವಾದುದರಿಂದ ಅದು ಸಾಮಾನ್ಯ; ಆದರೆ ಅದೇ ಪ್ರಾಣಿ ವರ್ಗ `ಜೀವಿ ಎಂಬ ವಿಶಾಲತರವರ್ಗಕ್ಕಿಂತ ಸಂಕುಚಿತವ್ಯಾಪ್ತಿಯನ್ನು ಹೊಂದಿರುವ ಕಾರಣ ವಿಶೇಷವೂ ಆಗಬಲ್ಲದು. ಸಾಮಾನ್ಯವೇ ಜಾತಿಯಾದರೆ ವಿಶೇಷವೇ ಉಪಜಾತಿ. ಎಲ್ಲಕ್ಕಿಂತಲೂ ವಿಶಾಲವ್ಯಾಪ್ತಿಯ ಜಾತಿ ಅಥವಾ ಸಾಮಾನ್ಯಕ್ಕೆ ಮಹತ್ತಮ ಸಾಮಾನ್ಯ ಅಥವಾ ಜಾತಿ (ಸಮಮ್ ಜೀನಸ್) ಎನ್ನುವರು. ಉದಾಹರಣೆಗೆ `ವಸ್ತು ಮಿಕ್ಕವುಗಳೊಂದಿಗೆ ಹೋಲಿಸಿದಾಗ ಮಹತ್ತಮ ಜಾತಿ. ಅದನ್ನು ಹೆಚ್ಚು ಹೆಚ್ಚು ಕಡಿಮೆ ವ್ಯಾಪ್ತಿಯುಳ್ಳ ಉಪಜಾತಿಗಳನ್ನಾಗಿ ವಿಂಗಡಿಸುತ್ತ ಹೋಗಬಹುದು- ಎಲ್ಲಕ್ಕಿಂತ ಕಡಿಮೆ ವ್ಯಾಪ್ತಿಯುಳ್ಳ ಕನಿಷ್ಠತಮ ಅಥವಾ ಉಪಜಾತಿಯವರೆಗೂ ಉದಾಹರಣೆ :

ಚಿತ್ರ-1

ಹಾಗೆಯೇ ಒಬ್ಬನನ್ನು ಕುಳ್ಳ ಎಂದಾಗ ಅದು ಆಗಂತುಕ ಗುಣವಾದರೂ ಅವನ ಅವಿಭಾಜ್ಯಗುಣ (ಇನ್‍ಸೆಪರಬಲ್), ಪಂಚೆಯುಟ್ಟವ ಎಂದಾಗ ಅದು ವಿಭಾಜ್ಯಗುಣ (ಸೆಪರಬಲ್).									(ಕೆ.ಕೆ.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ